ಎಜ್‍ವರ್ತ್ ಮರೈಯ
	1767-1849. ಇಂಗ್ಲಿಷ್ ಕಾದಂಬರಿಕಾರ್ತಿಯರಲ್ಲಿ ಒಬ್ಬಳು. ಶಿಕ್ಷಣವೇತ್ತ, ಪರಿಶೋಧಕ ರಿಚರ್ಡ್ ಲೊವೆಲನ ಹಿರಿಯ ಮಗಳು. ಹುಟ್ಟಿದ್ದ ಬ್ಲ್ಯಾಕ್ ಬರ್ಟನ್‍ನಲ್ಲಿ, ಎಳೆಯ ವಯಸ್ಸಿನಿಂದಲೂ ಕಥೆ ಹೇಳುವಲ್ಲಿ ನಿಪುಣೆ ಎನಿಸಿದ್ದಳು. ತಂದೆಯೊಡನೆ ಸಹಕರಿಸಿ ಪ್ರ್ಯಾಕ್ಟಿಕಲ್ ಎಜ್ಯುಕೇಷನ್ (1798), ಎಸ್ಸೆ ಆನ್ ಐರಿಷ್ ಬುಲ್ಸ್ (1802) ಎಂಬ ಕೃತಿಗಳನ್ನು ರಚಿಸಿದಳು. ಈಕೆಯ ಎಲ್ಲ ಸ್ವಂತ ಕೃತಿಗಳಿಗೂ ತಂದೆಯಿಂದ ಸ್ಪೂರ್ತಿ ದೊರಕಿತು. 1795ರಿಂದ 1847ರವರೆಗಿನ ಕಾಲದಲ್ಲಿ ಈಕೆ ಬರೆದ ಗ್ರಂಥಗಳು 20 ಸಂಪುಟಗಳಷ್ಟಾಗುತ್ತವೆ. ಟೇಲ್ಡಸ್ ಫ್ರಮ್ ಫ್ಯಾಷನಬಲ್ ಲೈಫ್ ಮತ್ತು ಹ್ಯಾರಿಂಗ್ಟನ್‍ಗಳಲ್ಲದೆ ಅವರ ಐರಿಷ್ ಉದ್ಘಕೃತಿಗಳೆಂದರೆ ಕ್ಯಾಸೆಲ್ ರ್ಯಾಕ್ರೆಂಟ್ (1800), ದಿ ಅಬ್ಸೆಂಟೀ (1812) ಮತ್ತು ಆರ್ಮಾಂಡ್ (1817). ಈಕೆಯ ಬರಹಗಳು ತುಂಬ ಉಪದೇಶಾತ್ಮಕವಾಗಿ ಕಂಡರೂ ನುಡಿ ಜಾಣ್ಮೆ, ತೀವ್ರ ಸುಖದುಃಖಗಳು, ಸಜೀವ ಸಂಭಾಷಣೆಗಳು, ನೇರ ಹಾಗೂ ಸುಲಭ ಶೈಲಿ, ಕಳೆಕಳೆಯಾದ ಸಹಜತೆ, ಆ ಕಾಲದ ನೈಜ ಚಿತ್ರಣ-ಇವುಗಳಿಂದಾಗಿ ಇಂದಿಗೂ ವ್ಯಾಸಂಗಯೋಗ್ಯವಾಗಿವೆ. ದಿ ಮೆಮಾಯಿರ್ಸ್ ಆಫ್ ರಿಚರ್ಡ್ ಲೊವೆಲ್ ಎಂಬುದು 1782ರ ವರೆಗಿನ ಈಕೆಯ ಆತ್ಮಕಥೆಯಾಗಿದೆ. ಈಕೆ ಮಕ್ಕಳಿಗಾಗಿ ಮಾರಲ್ ಟೇಲ್ಸ್ (1801), ಪಾಪ್ಯುಲರ್ ಟೇಲ್ಸ್ (1804), ಫ್ರ್ಯಾಂಕ್ (1822), ಹ್ಯಾರಿ ಅಂಡ್ ಲೂಸಿ (1825) ಮುಂತಾದ ಒಳ್ಳೆಯ ಪುಸ್ತಕಗಳನ್ನು ಬರೆದಿದ್ದಾಳೆ.										
     (ಎಚ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ